ನಿನಗೆ ಏನೂ ಆಗೊಲ್ಲ , ಹೇಳಿದ್ದು ಮಾಡಲ್ಲ . ಜೀವನ ನೀನು ಅಂದುಕೊಂಡಷ್ಟು ಸುಲಭವಲ್ಲ ..."
ಹೀಗೆ ನೀನು ಮಾತು ಆಡುತ್ತಲೇ ಹೋದೆ . ನಿನ್ನ ಈ ಮಾತುಗಳು ಒಂದು ಸಾರಿ ಅಲ್ಲ ಈಗಾಗಲೇ ಹಲವು ಬಾರಿ ಹೇಳಿದ್ದೆ , ನಾನೂ ಕೇಳಿದ್ದೆ .
ಸಮಯ ಒಂದೇ ತರಹ ಇರುವುದಿಲ್ಲ ಅಲ್ವಾ ? ಅವತ್ತು ನಿನ್ನ ಈ ಮಾತುಗಳು ನನಗೆ ಬಹಳವಾಗೇ ಮನಸ್ಸಿಗೆ ಚುಚ್ಚಿತ್ತು .
ಸ್ವಾಭಿಮಾನದಿಂದ ಮನಸ್ಸು ಕುದ್ದಿತ್ತು . ಎರಡು ವರ್ಷದ ಸ್ನೇಹ, ಪ್ರೀತಿಯೂ ಬೇಡ ಅನ್ನಿಸಿದ್ದು ಆಗಲೇ ನೋಡು . ನೀನು ನನಗೆ ಬರೀ ಗೆಳೆಯನಾಗಿರಲಿಲ್ಲ . ಗುರುವೂ ಆಗಿದ್ದೆ . ಪ್ರತೀ ಸಾರಿಯೂ ನಿನ್ನ ಪ್ರತಿಯೊಂದು ಮಾತಿಗೂ ನಾನು ಬೆಲೆ ಕೊಟ್ಟು ನೀ ಹೇಳಿದಂತೆ ಕೇಳಿದ್ದೆ . ಆತ್ಮ ವಿಶ್ವಾಸ ಬೆಳೆಸಿದವನು ನೀನು ಆದರೆ ನೀನೇ ಮತ್ತೆ ಮತ್ತೆ ಇಂಥ ಮಾತುಗಳು ಹೇಳಿದಾಗ ನಾನು ಸಹಿಸದಾದೆ. ನಿನ್ನ ಬಳಿ ಇನ್ನು ಮಾತನಾಡಬಾರದು , ಯಾವಾಗ ನಾನು ನಿನ್ನ ಮಾರ್ಗದರ್ಶನ ಇಲ್ಲದೇ ಅಂದುಕೊಂಡದ್ದು ಸಾಧಿಸುವೆನೋ, ಆಗಲೇ ಮತ್ತೆ ನಿನ್ನ ಬಳಿ ಬರುವೆ ಎಂದು ನಿರ್ಧರಿಸಿದೆ.
ಇಂದಿಗೆ ಐದು ದಿನವಾಯಿತು ನಿನ್ನ ಬಳಿ ಮಾತನಾಡಿ . ಮೊದಲೆಲ್ಲ ನಾವು ಎಷ್ಟೋ ಸಾರಿ ಜಗಳವಾಡಿದ್ದೆವು . ಆಗೆಲ್ಲ ನೀನು ಬಂದು ರಮಿಸಿ ಮುದ್ದು ಮಾತಾಡಿ , ನನಗಾಗಿ ದೊಡ್ಡ ರಸಿಕನಂತೆ ಹೊಸ ಕವಿತೆಗಳನ್ನು ಬರೆದು ಹೇಳುತ್ತಿದ್ದೆ . ಕವಿತೆಗಳಲ್ಲೇ ಬೇಡಿ ಮನಸು ಕರಗುವಂತೆ ಮಾಡುತ್ತಿದ್ದೆ. ಆದರೆ ಇಂದು ನನ್ನ ಮನಸ್ಸು ಕಲ್ಲಾದಂತೆ ನಿನ್ನ ಮನಸ್ಸು ಕಲ್ಲಾಗಿರಬೇಕು . ಅಥವಾ ನಾನು ನಿನಗೆ ಬೇಡವಾದೆನಾ ?
ನಾನು ನಿನ್ನ ಎಷ್ಟು ಹಚ್ಚಿಕೊಂಡಿದ್ದೆ ಅಂತ ಈಗಲೇ ನನಗೆ ತಿಳಿದದ್ದು . ಪ್ರತೀ ದಿನ ಹತ್ತು ಸಾರಿ ನನ್ನ ಮೊಬೈಲ್ ಚೆಕ್ ಮಾಡುತ್ತೆನೆ . ಆದರೆ ನಿನ್ನ ಯಾವುದೇ ಮೆಸೇಜ್ ಬಂದಿರುವುದಿಲ್ಲ . ಮುದ್ದು ನಾನು ನಿಜವಾಗಿ ಪೆದ್ದು ಕಣೋ.. ಅಂದು ನಿನ್ನ ಮೇಲಿನ ಕೋಪದಿಂದ ನಿನ್ನ ಯಾವುದೇ ಮೆಸೇಜ್ ಬರದಂತೆ ನಾನು ನನ್ನ ಮೊಬೈಲ್ನಲ್ಲಿ ನಿನ್ನ ಬ್ಲಾಕ್ ಮಾಡಿದ್ದೆ. ಅದೂ ಸಹ ಮರೆತು ಹೋಗಿದೆ. ಆದರೆ ಆ ಬ್ಲಾಕ್ ತೆಗೆಯಲು ನನ್ನ ಸ್ವಾಭಿಮಾನ ಮತ್ತೆ ಅಡ್ಡ ಬರುತ್ತಿದೆ . ಆದರೂ ನಾನು ಏನು ಎಂದು ನಿನಗೆ ಚೆನ್ನಾಗಿ ಗೊತ್ತು. ನಿನ್ನ ಮಾತನಾಡದೇ ಐದು ದಿನ ಹೇಗೆ ಕಳೆದಿರಬಹುದು ಎಂಬ ಊಹೆ ನಿನಗೆ ಇರುತ್ತದೆ.
ಇಲ್ಲ ಕಣೋ ನಾನು ಓದಿ ಬ್ಯಾಂಕ್ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ತೆಗೆದು ಕೆಲಸ ಗಿಟ್ಟಿಸಿದ ಮೇಲೆಯೇ ನಿನಗೆ ಮುಖ ತೋರಿಸುವೆ . ಒಂದು ದುರ್ಬಲ ಏನು ಗೊತ್ತ . ಎಷ್ಟು ಗಟ್ಟಿ ಮನಸ್ಸು ಮಾಡಿದರೂ ನಿನ್ನ ನೆನಪು ಮಾತ್ರ ಮನದಿಂದ ದೂರಾಗುತ್ತಿಲ್ಲ . ನಿನ್ನ ನೆನಪು ಬಂದಾಗ ಹುಚ್ಚಿಯಂತೆ ಒಬ್ಬಳೇ ಕೂತು ಅತ್ತು ಬಿಡುತ್ತೇನೆ.
ಬೇಕಿಲ್ಲ ಈ ಕೋಪ . ಓಡಿ ನಿನ್ನ ಬಳಿ ಬಂದು ಬಿಡಲೇ ಅಂತ ನೂರು ಸಾರಿ ಅಂದುಕೊಳ್ಳುತ್ತೇನೆ .
ಆದರೆ ಆಗ ನಿನ್ನ ಮಾತು ನಿಜವಾಗಿ ಬಿಡುತ್ತದೆ . ನಾನು ಏನೂ ಸಾಧಿಸುವುದಿಲ್ಲ. ನಾನು ಸೋತು ಹೋಗುತ್ತೇನೆ ಎಂದು ನೆನೆದಾಗ ಮತ್ತೆ ನನ್ನ ಸ್ವಾಭಿಮಾನ ಎಚ್ಚರ ಗೊಳ್ಳುತ್ತದೆ.
ದಯವಿಟ್ಟು ನನ್ನ ನೆನಪಿನಿಂದ ದೂರ ಹೋಗಿಬಿಡು . ನಿನ್ನ ದ್ವೇಷಿಸಲಂತೂ ಸಾಧ್ಯವಿಲ್ಲದ ಮಾತು. ಆದರೆ ಸ್ವಲ್ಪ ದಿನದ ಮಟ್ಟಿಗೆಯಾದರೂ ಈ ನರಕ ಯಾತನೆ ಅನುಭವಿಸಲೇ ಬೇಕಿದೆ.
ನೀನು ನಾನು ಮತ್ತೆ ಸೇರುವ ಕಾಲ ಬರುವವರೆಗೂ ಈ ಡೈರಿನೇ ನನಗೆ ಗೆಳೆಯ. ನಿನ್ನ ಎಷ್ಟು ಮಿಸ್ ಮಾಡಿಕೊಂಡೆ ಎಂದು ನೀನು ಇದನ್ನು ಓದಿದಾಗ ತಿಳಿಯುತ್ತದೆ.
ಅಂದು ನಾನೇ ಓದಲು ಕೊಡುತ್ತೇನೆ. ಅದುವರೆಗೂ ನೀನು ಕಾಯಲೇಬೇಕು . ನಿನ್ನ ಬಳಿ ನನ್ನ ಒಂದೇ ಬೇಡಿಕೆ ಕಣೋ. ನಾನು ಬರುವವರೆಗೂ ನನಗಾಗಿ ಕಾಯುವೆಯಾ ??
ಅಥವಾ ಎಲ್ಲಾ ಹುಡುಗರಂತೆ ನನ್ನ ಮರೆತು ಬೇರೆ ಹುಡುಗಿಯ ಬಳಿ ಹೋಗುವೆಯಾ ? ಹಾಗೇನಾದರೂ ಆದರೆ ನಿನ್ನ ಕೊಂದು ನಾನೂ ಸತ್ತು ಹೋಗುತ್ತೇನೆ ಕಣೋ ಇದು ನಿಜ .
©Yakshitha
ಪ್ರೀತಿಯ ತುಣುಕು ಪ್ರೀತಿ ಪ್ರೀತಿಯ ಕಾಣಿಕೆ ಮೋಸದ ಪ್ರೀತಿ ಅಮ್ಮನ ಪ್ರೀತಿ